ಖಾದ್ರಿಶಾಮಣ್ಣ

	(1925-1990) ವಿದ್ಯಾರ್ಥಿದೆಸೆಯಿಂದಲೇ ಭಾಷೆಯ ಮೇಲೆ ಒಳ್ಳೆಯ ಸ್ವಾಮ್ಯ. ರಾಜಕೀಯದಲ್ಲಿ ಹರಿತವಾದ ಪ್ರಜ್ಞೆ. ಗಾಂಧೀವಾದದ ಬಗ್ಗೆ ಒಲವು ಮಾತ್ರವಲ್ಲ, ಒಳ್ಳೆ ಪ್ರಜ್ಞೆ- ಹೀಗೆಂದು ಖಾದ್ರಿಶಾಮಣ್ಣನವರ ಬಗ್ಗೆ ಹೇಳಿದವರು ಐವತ್ತು ವರ್ಷಗಳ ಗೆಳೆತನ ಹೊಂದಿದ್ದ ಎಚ್.ವೈ.ಶಾರದಾಪ್ರಸಾದ್.

		ಕೆಲವು ಪತ್ರಕರ್ತರು ತಮ್ಮ ಸರ್ವಸ್ವವನ್ನು ತಮ್ಮ ಪತ್ರಿಕೆಗಳಿಗೆ ವಿನಿಯೋಗಿಸುತ್ತಾರೆ. ಇನ್ನು ಕೆಲವರು ಬೇರೆಯಾಗಿ ಪುಸ್ತಕ ಬರೆಯುವುದನ್ನು ಮಾಡುತ್ತಾರೆ. ಖಾದ್ರಿಶಾಮಣ್ಣ ಮೊದಲ ಗುಂಪಿಗೆ ಸೇರಿದ ಲೇಖಕರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ತಾತಯ್ಯ, ಡಿ.ವಿ.ಜಿ., ತಿ.ತಾ.ಶರ್ಮ, ಸಿದ್ದವನಹಳ್ಳಿ ಕೃಷ್ಣಶರ್ಮರ ನಂತರದ ಪೀಳಿಗೆಯವರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು. ತೀಕ್ಷ್ಣ ಸಂಪಾದಕೀಯಗಳಿಗೆ, ರಂಗುರಂಗಾದ ನುಡಿ ಚಿತ್ರಗಳಿಗೆ, ರೋಚಕ ತಲೆಬರಹಗಳಿಗೆ, ವ್ಯಕ್ತಿ-ಊರು-ದೇಶಗಳ ಹೆಸರುಗಳನ್ನು ಕರಾರುವಾಕ್ಕಾಗಿ ಹೇಳುವ ಪ್ರತಿಭಾವಂತಿಕೆಗೆ ಮತ್ತೊಂದು ಹೆಸರು ಖಾದ್ರಿಶಾಮಣ್ಣ. ಅವರಿಗೆ ಪತ್ರಿಕೋದ್ಯಮ ಒಂದು ದೀಕ್ಷೆಯಾಗಿತ್ತು; ಹೊಟ್ಟೆಪಾಡಿಗಾಗಿ ವೃತ್ತಿ ಅರಸಿಕೊಂಡು ಬಂದವರಲ್ಲ. ಅವರ ಸ್ವಧರ್ಮವೇ ಪತ್ರಿಕೋದ್ಯಮ. ವಿಚಾರಪ್ರಸಾರ ಅವರ ಮೂಲಮಂತ್ರ. ಕನ್ನಡದ ಕೂಗಾಗಲಿ, ಸಮಾಜದ ತುಳಿತಕ್ಕೊಳಗಾದವರ ದನಿಯಾಗಲಿ, ಮಹಿಳೆಯರ ಆರ್ತನಾದವಾಗಲಿ-ಖಾದ್ರಿಯವರ ಲೇಖನಿಗೆ ಅವನ್ನೆಲ್ಲಾ ಮನಮುಟ್ಟುವಂತೆ ಚಿತ್ರಿಸುವ ಸತ್ವ-ಕಸುವು ಇತ್ತು. ಇಂದಿಗೂ, ಅವರ, 'ರೈತರು ಬಂದರು ದಾರಿಬಿಡಿ' ಸಂಪಾದಕೀಯ ಎಲ್ಲರ ಬಾಯಲ್ಲೂ ಹಚ್ಚ ಹಸಿರು.

	ಮೇಲುಕೋಟೆಯ ವೈದಿಕ ಮನೆತನದಲ್ಲಿ ಜೂನ್ 6, 1925 ರಂದು ಜನನ. ಪ್ರಾಥಮಿಕ ವಿದ್ಯಾಭ್ಯಾಸದ ಜತೆಯಲ್ಲೇ ಸಂಸ್ಕøತ ಶಿಕ್ಷಣ. ಮನೆಗೆ ದೊಡ್ಡಮಗ. ಮದ್ರಾಸಿನಲ್ಲಿದ್ದ ಚಿಕ್ಕಪ್ಪ, ಅತ್ತೆಯರಿಗೆ ಪ್ರೀತಿಯಚಾಮು. ಚಿಕ್ಕಪ್ಪನೊಡನೆ ಎಳೆಯನಿರುವಾಗಲೇ ಮದ್ರಾಸಿನ ಮರೀನಾ ಸಮುದ್ರದಂಡೆಯಲ್ಲಿ ಆ ಕಾಲದಲ್ಲಿ ರಾಷ್ಟ್ರನಾಯಕರ ಭಾಷಣ ಕೇಳುವ ಅವಕಾಶ. ಅಲ್ಲಿಂದಲೇ ರಾಷ್ಟ್ರೀಯ ವಿಚಾರಕ್ಕೆ ಬೀಜಾಂಕುರ. ಮೇಲುಕೋಟೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವಾದ ಮೇಲೆ ಮೈಸೂರಿನ ಮಹಾರಾಜಾ ಪ್ರೌಢಶಾಲೆಯಲ್ಲಿ ಓದು. ಆಗಲೇ ತಮ್ಮ ಹಿರಿಯ ವಿದ್ಯಾರ್ಥಿಗಳನ್ನೂ ಮಾತಿನಲ್ಲಿ ಮಣ್ಣು ಮುಕ್ಕಿಸುತ್ತಿದ್ದ ಗತ್ತು-ಗಮತ್ತು. ಸ್ವಾಮಿ ವಿವೇಕಾನಂದ-ರಾಮಕೃಷ್ಣ ಪರಮಹಂಸರ ಪ್ರಭಾವ. ಆಗಿನಿಂದಲೇ ಪ್ರತಿಭಟನೆ ಅವರ ವ್ಯಕ್ತಿತ್ವದ ಅಭಿನ್ನ ಅಂಶÀ. ಕಂದಾಚಾರದ ವಿರುದ್ಧ, ಸಂಪ್ರದಾಯದ ವಿರುದ್ಧ ಬಂಡೆದ್ದರು. ಬಲಾತ್ಕಾರವಾಗಿ ಉಪನಯನ ಮಾಡಿದಾಗ, ಜನಿವಾರ ಕಿತ್ತೆಸದು ಹೊರಬಂದರು. ಅವರೊಬ್ಬ ಹುಟ್ಟಾ ಸಮಾಜವಾದಿ. ಸ್ವಾಭಾವಿಕವಾಗಿಯೇ ಅಂದಿನ ಸಮಾಜವಾದಿ ಚಳವಳಿಯ ಹಿರಿಯರಾದ ಜಯಪ್ರಕಾಶ್ ನಾರಾಯಣ್, ಲೋಹಿಯಾ ಕಡೆಗೆ ಹೆಚ್ಚು ಆಕರ್ಷಿತರಾದರು. ಸ್ವಾತಂತ್ರ್ಯ ಚಳವಳಿಗೆ ವಿದ್ಯಾರ್ಥಿ ಚಳವಳಿಯ ಮೂಲಕ ಪ್ರವೇಶ, ಗಾಂಧೀಜಿ ಅವರ ಆತ್ಮಕಥೆ ಪುಸ್ತಕವನ್ನು ಓದಿದರು. ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದ ಬಹುಮಾನದ 5 ರೂಪಾಯಿಗಳಿಗೆ ಖರೀದಿಸಿ ಓದಿದ್ದು ಆ ಪುಸ್ತಕವನ್ನು, ಗಾಂಧೀಜಿಯವರ `ಯಂಗ್ ಇಂಡಿಯಾ ಸಂಪುಟವನ್ನು. ಗಣಿತದ ತರಗತಿಯಲ್ಲಿ ಕುಳಿತು ಕಾರ್ಲ್‍ಮಾಕ್ರ್ಸ್‍ನ `ದಾಸ್ ಕ್ಯಾಪಿಟಲ್ ಓದುತ್ತಿದ್ದರಂತೆ.
	ಇಂಟರ್‍ಮೀಡಿಯಟ್ ಓದಿಗಾಗಿ ಯುವರಾಜಕಾಲೇಜಿಗೆ ಸೇರಿದರು. ಆದರೆ ಚಳವಳಿ ಅವರನ್ನು ಬಿಡಲಿಲ್ಲ. ಮಹಾರಾಜ ಕಾಲೇಜು ಜ್ಯೂನಿಯರ್ ಬಿ.ಎ.ಹಾಲ್. ಬಾಂಬ್‍ಸ್ಫೋಟದ ಸಂಚು, ಪೊಲೀಸರ ಕೈಗೆ ಶ್ರೀರಂಗಪಟ್ಟಣದ ಕಿರಂಗೂರು ಸೇತುವೆ ಬಳಿ ಸಿಕ್ಕಿ ಬಿದ್ದರು. ಜೈಲುವಾಸ. ನಂತರ ಕಾಲೇಜು ವಿದ್ಯಾಭ್ಯಾಸಕ್ಕೆ ವಿದಾಯ. ಲೋಕ ಜೀವನ ಶಿಕ್ಷಣ ಆರಂಭ. `ದೇಶಕ್ಕೆ ಸ್ವಾತಂತ್ರ್ಯ ಬರುವರೆಗೂ ಕಾಲೇಜಿಗೆ ಹೋಗುವುದಿಲ್ಲ ಎಂಬ ಪ್ರತಿಜ್ಞೆ. 1942ರ `ಚಲೇಜಾವ್ ಚಳವಳಿಯಲ್ಲಿ ಸಕ್ರಿಯ. `ಹರಿಜನ ಪತ್ರಿಕೆಯನ್ನು ವಾರವಾರವೂ ಒಂದು ಅಕ್ಷರವು ಬಿಡದೆ ಓದುತ್ತಿದ್ದೆ-ಎಂದು ಖಾದ್ರಿಯವರೇ ಒಂದು ಕಡೆ ಹೇಳಿದ್ದಾರೆ 1944ರಲ್ಲಿ ನಂಜನಗೂಡಿನಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಸಮಾವೇಶ ಸಂಘಟನೆ ಮಾಡಿದರು. 1944ರ ಮಧ್ಯಭಾಗದಲ್ಲಿ ಜನವಾಣಿ ಪತ್ರಿಕೆಗೆ. ಅಲ್ಲಿ ಆರು ತಿಂಗಳ ಕಾಲ ಕೆಲಸ. ಪತ್ರಿಕಾ ವೃತ್ತಿ ಹೋರಾಟಕ್ಕೆ ತಕ್ಕ ಕಸಬು ಎಂಬ ನಂಬಿಕೆ ಬೇರೂರಿತು, ಎಳೆಯ ಖಾದ್ರಿಯಲ್ಲಿ. ಅದು ಕೊನೆ ತನಕ ಅವರ ಉಸಿರಾಗಿತ್ತು. ಅದೇ ವರ್ಷದ ನವೆಂಬರ್‍ನಲ್ಲಿ ಸೇವಾ ಗ್ರಾಮಕ್ಕೆ ನಯೀತಾಲೀಂ ಶಿಕ್ಷಣ ಶಿಬಿರದಲ್ಲಿ ಸೇರಿಕೊಂಡರು. ಸೇವಾಗ್ರಾಮದಲ್ಲಿ ಗಾಂಧೀಜಿ ಸಾನಿಧ್ಯ. ಆಶ್ರಮಕ್ಕೆ ಬರುತ್ತಿದ್ದ ನೂರಾರು ಪತ್ರಿಕೆಗಳಲ್ಲಿ ಮುಖ್ಯವಾದ ಇಂಗ್ಲಿಷ್ ಪತ್ರಿಕೆಗಳನ್ನೆಲ್ಲ ಓದಿ ಗಾಂಧೀಜಿಯವರ ಅವಗಾಹನೆಗಾಗಿ ಕತ್ತರಿಸಿ ಇಡುವ ಕೆಲಸ. ಅದೂ ಒಂದು ಶಿಕ್ಷಣವಾಗಿ ಪರಿಣಮಿಸಿತು. ಸೇವಾ ಗ್ರಾಮದಿಂದ ಹಲವಾರು ಕನ್ನಡ ಪತ್ರಿಕೆಗಳಿಗೆ ನಿಯಮಿತವಾಗಿ ಲೇಖನಗಳನ್ನು ಬರೆದರು. ವಿಶೇಷ ಸುದ್ದಿಗಳನ್ನು ಕಳುಹಿಸಿದರು.
	ಅಲ್ಲಿಂದ ಮೈಸೂರಿಗೆ ಮರಳಿ. ಎಚ್.ಸಿ. ದಾಸಪ್ಪ ದಂಪತಿಗಳ ನೇತೃತ್ವದಲ್ಲಿ ಕೆಲಸ. ನಂತರ ಗೆಳೆಯರ ಜತೆ ಗೂಡಿ ಕರ್ನಾಟಕ ಕಾಂಗ್ರೆಸ್ ಸೋಷಲಿಸ್ಟ್ ಪಕ್ಷ ಸಂಘಟಿಸಲು ತೀರ್ಮಾನ. ಕಮಲಾದೇವಿ ಚಟ್ಟೋಪಾಧ್ಯಾಯ ಮಾರ್ಗದರ್ಶನ. ಕರ್ನಾಟಕದಾದ್ಯಂತ ಜಯಪ್ರಕಾಶನಾರಾಯಣರ ಪ್ರವಾಸ. ಮಂಗಳೂರಿನಲ್ಲಿ ಸೋಷಲಿಸ್ಟ್ ಸಮ್ಮೇಳನ. `ಜಾಗೃತಿ' ಪತ್ರಿಕೆ ಸಂಪಾದಕನನ್ನಾಗಿ ಮಾಡಿ ಮುಂಬೈಗೆ ಕಮಲಾದೇವಿ ಕರೆದೊಯ್ದರು. ನಂತರ ಅದು ಧಾರವಾಡಕ್ಕೆ ಖಾದ್ರಿಯವರ ನೇತೃತ್ವದಲ್ಲೇ ಸ್ಥಳಾಂತರ. 1948ರ ಜೂನ್ ವೇಳೆಗೆ ಬೆಂಗಳೂರಿಗೆ ಪತ್ರಿಕೆ ವರ್ಗ, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮೈಸೂರು ಸೀಮೆಯಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ನಡೆದ ಹೋರಾಟದಲ್ಲಿ ಪಾತ್ರ. 'ಜಾಗೃತಿ' ಕೆಲವು ಸಂಚಿಕೆಗಳು ಬೆಂಗಳೂರಿನಲ್ಲಿ ಪ್ರಕಟಗೊಂಡವು. ಅರಸೊತ್ತಿಗೆ ಇಲ್ಲದ ಕರ್ನಾಟಕ ಆಗಲೇಬೇಕೆಂಬ ಲೇಖನ ಪತ್ರಿಕೆಯಲ್ಲಿ ಪ್ರಕಟವಾಯಿತು. ಸ್ವಾತಂತ್ರ್ಯ ಸಂಗ್ರಾಮದ ಫಲವಾಗಿ ಅಧಿಕಾರಕ್ಕೆ ಬಂದ ಕೆ.ಸಿ. ರೆಡ್ಡಿ ಸರ್ಕಾರ 'ಜಾಗೃತಿ'ಯಿಂದ ಐದು ಸಾವಿರ ರೂಪಾಯಿ `ಠೇವಣಿ ಹಣ ಕೇಳಿತು. ಠೇವಣಿ ಹಣಕೊಡಲಿಲ್ಲ. ಆಗಲಿಲ್ಲ. ಪತ್ರಿಕೆ ನಿಂತು ಹೋಯಿತು. 'ಜಾಗೃತಿ' ನಾಡಿನೆಲ್ಲೆಡೆ ಬಹು ಜನಪ್ರಿಯವಾಗಿತ್ತು. ಅದರಲ್ಲಿ ಬರುತ್ತಿದ್ದ ರಾಜಕೀಯ ಲೇಖನಗಳನ್ನು ಅತ್ಯಂತ ಜನರು ಆಸಕ್ತಿಯಿಂದ ಎದಿರು ನೋಡುತ್ತಿದ್ದರು.
	1948ರ ಏಪ್ರಿಲ್ 15 ರಂದು ನಾಸಿಕ್‍ನಲ್ಲಿ ನಡೆದ ಸಮಾಜವಾದಿಗಳ ಸಮ್ಮೇಳನದಲ್ಲಿ ಪಾಲ್ಗೊಂಡರು. ಅಲ್ಲೇ ಸೋಷಲಿಸ್ಟರು ಕಾಂಗ್ರೆಸ್ ತೊರೆಯಲು ತೀರ್ಮಾನಿಸಿದ್ದು. 1948-50ರ ಅವಧಿಯಲ್ಲಿ ಪ್ರಜಾವಾಣಿ ಸುದ್ದಿ ಸಂಪಾದಕ. ಆನಂತರ ಅದರ ಜಂಟೀ ಸಂಪಾದಕ. ಸಿ.ಜಿ.ಕೆ. ರೆಡ್ಡಿ ಜತೆಗೂಡಿ ಎಚ್.ಎ.ಎಲ್. ಕಾರ್ಮಿಕ ಮುಷ್ಕರದಲ್ಲಿ ಭಾಗವಹಿಸಿದ್ದಕ್ಕೆ ಕೆಲಸಕ್ಕೆ ರಾಜೀನಾಮೆ. ಮತ್ತೆ ರಾಜಕಾರಣಕ್ಕೆ. 1950 ರಿಂದ 60ರವರೆಗೆ ಸಮಾಜವಾದಿ ಹಾಗೂ ಸರ್ವೋದಯ ಚಳವಳಿಗಳಲ್ಲಿ ಸಕ್ರಿಯ. ಕರ್ನಾಟಕದಲ್ಲಿ ಸಮಾಜವಾದಿ ಚಳವಳಿ ಸಂಘಟಿಸಲು ಊರೂರು ಅಲೆತ. ಪ್ರಸಿದ್ಧ ಕಾಗೋಡು ಸತ್ಯಾಗ್ರಹದಲ್ಲಿ ಮಹತ್ವದ ಪಾತ್ರ. ಸೆರೆವಾಸ ಸ್ವಾತಂತ್ರ್ಯ ಬಂದ ನಂತರವೂ 1952ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು  ಕ್ಷೇತ್ರದಿಂದ ಸ್ಪರ್ಧಿಸಿ, ಠೇವಣಿ ಉಳಿಸಿಕೊಂಡರು! ಅದು ಒಂದು ಸಾಧನೆಯೇ, ಪ್ರಬಲ ಕಾಂಗ್ರೆಸ್ ಎದುರಿಗೆ. ಆ ಚುನಾವಣೆಗಾಗಿ ಖಾದ್ರಿ ವೆಚ್ಚ ಮಾಡಿದ್ದು 350 ರೂಪಾಯಿ. ಜೆ.ಪಿ. ಸರ್ವೋದಯದ ಕಡೆ ಜಾರಿದಾಗ, ವಿನೋಬಾ ಸೆಳೆತಕ್ಕೆ ಖಾದ್ರಿ ಸಹ. ಜೆ.ಪಿ. ವಿನೋಬಾ ಭಾಷಣಗಳ ಕನ್ನಡ ಭಾಷಾಂತರಕಾರರಾಗಿ ಮನಮುಟ್ಟುವ ಭಾಷಣ ಶೈಲಿಯಿಂದ ಜನಪ್ರಿಯ.

	ಮೈಸೂರಿನಲ್ಲಿ ಗಾಂಧೀಗ್ರಂಥಮಾಲೆಯಲ್ಲಿ ಪ್ರೊ. ಯಾಮುನಾಚಾರ್ಯರ ಜತೆ ಸಂಪಾದಕ ಮಂಡಲಿಯಲ್ಲಿ. ಗಾಂಧೀ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ಭಾಗಿ. `ಗಾಂಧೀ ಅರ್ಥವಿಚಾರ ಹಾಗೂ 'ರಾಜನೀತಿ' ಅನುವಾದಿಸಿದರು. 1960ರಿಂದ ಮತ್ತೆ ಬೆಂಗಳೂರಿಗೆ. ಈ ಬಾರಿ, 'ಸಂಯುಕ್ತ ಕರ್ನಾಟಕದ ಸುದ್ದಿ ಸಂಪಾದಕರಾಗಿ ಸೇರಿದರು. ಆಗ 'ವಿಶ್ವಮಿತ್ರ ಎಂಬ ಹೆಸರಿನಲ್ಲಿ ವಾರ, ವಾರವೂ ಬಿಡಿಸುತ್ತಿದ್ದ ನುಡಿಚಿತ್ರ `ವಾರದ ವ್ಯಕ್ತಿ-ಬಹಳ ಜನಪ್ರಿಯವಾಗಿತ್ತು. 1963ರಿಂದ 1965ರವರೆಗೆ ತಾಯಿನಾಡು ಬಳಗ ಆರಂಭಿಸಿದ, 'ಗೋಕುಲ ವಾರಪತ್ರಿಕೆ ಸಂಪಾದಕ, ಹೊಸತನ, ಹೊಸ ಲೇಖಕರ, ಕಲಾವಿದರ ಪರಿಚಯ. ನಾವಿನ್ಯತೆಗೆ ಹೆಸರಾಗಿ 'ಗೋಕುಲ, ವಾರಪತ್ರಿಕೆ ಬಂದಿತು. ಅನೇಕಾನೇಕ ಹೊಸ ಬರಹಗಾರರು 'ಗೋಕುಲದ ಮೂಲಕ ನಾಡಿಗೆ ದೊರೆತರು. ಪುನಃ `ಪ್ರಜಾವಾಣಿ ಕೈಬೀಸಿ ಕರೆಯಿತು. 

	1965ರಿಂದ 1974ರವರೆಗೆ ಮತ್ತೆ ಪ್ರಜಾವಾಣಿ ಸುದ್ದಿ ಸಂಪಾದಕ. 1974ರ ಕೊನೆಯಿಂದ ಏಪ್ರಿಲ್ 1978ರವರೆಗೆ 'ಸಂಯುಕ್ತ ಕರ್ನಾಟಕ ಪತ್ರಿಕಾ ಬಳಗದ ಪ್ರಧಾನ ಸಂಪಾದಕ. ಜುಲೈ 1978ರಿಂದ 1990ಮೇ 11ರವರೆಗೆ ಅಂದರೆ ಅವರ ನಿಧನದವರೆಗೆ 'ಕನ್ನಡ ಪ್ರಭದ ಸಂಪಾದಕ.

	1975ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಖಾದ್ರಿ ಅವರ ಚಡಪಡಿಕೆ ಸಮೀಪದಲ್ಲಿದ್ದವರಿಗೆ ಗೊತ್ತಾಗುತಿತ್ತು. ಆದರೂ ಭೂಗತ ಚಳವಳಿಯಲ್ಲಿ ಸಕ್ರಿಯ. ಜಾರ್ಜ್‍ಫರ್ನಾಂಡೀಸ್, ಸಿ.ಜಿ.ಕೆ. ರೆಡ್ಡಿ-ಬರೋಡಾ ಡೈನಮೆಟ್ ಪ್ರಕರಣದಲ್ಲಿ ಗುಪ್ತಗಾಮಿನಿಯಾಗಿ ಖಾದ್ರಿ ಕೆಲಸ ಮಾಡಿದರು.

	ಕಾಂಗ್ರೆಸ್ ವಿರೋಧಿ ಸರ್ಕಾರಗಳ ರಚನೆಯಲ್ಲಿ ಬಹಳ ಆಸಕ್ತಿ, ಖಾದ್ರಿ ಅವರ ಸಹಜ ವೈಚಾರಿಕ ಧೋರಣೆ. ರಾಮಕೃಷ್ಣ ಹೆಗಡೆ ಸರ್ಕಾರ ರಚಿತವಾದಾಗ, 1984ರಲ್ಲಿ ರಾಜ್ಯ ವಿಧಾನಪರಿಷತ್ ಸದಸ್ಯರಾಗಿ ನಾಮಕರಣ.

	ಮುದ್ದಾದ ಅಕ್ಷರಗಳು, ಅಚ್ಚುಕಟ್ಟಾದ ವಿಚಾರಮಂಡನೆ. ಗಂಭೀರ. ಉಡಾಫೆಗೆ ಅವಕಾಶವೇ ಇಲ್ಲ. ಯುವ ಪೀಳಿಗೆ ಪ್ರತಿಭೆ ಕಂಡರೆ ಬಹಳ ಮೆಚ್ಚುಗೆ, ಪ್ರೋತ್ಸಾಹ. ಪೀಳಿಗೆಯ ಅಂತರ ಕಾಣದ ಪತ್ರಕರ್ತ.

	ಪ್ರಜಾವಾಣಿ ಪತ್ರಿಕೆಯಲ್ಲಿದ್ದಾಗ ಲಂಡನ್ನಿನ ಕಾರ್ಡಿಫ್‍ಗೆ ಥಾಂಸನ್ ಪ್ರತಿಷ್ಠಾನದಲ್ಲಿ ವಿಶೇಷ ಪತ್ರಿಕೋದ್ಯಮ ತರಬೇತಿ. ಮೈಸೂರು ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ. ಎ.ಎಫ್.ಡಬ್ಲ್ಯುಜೆ. ಕಾರ್ಯದರ್ಶಿ. ಅಖಿಲ ಭಾರತ ಸಂಪಾದಕರ ಸಮ್ಮೇಳನದ ಸ್ಥಾಯೀ ಸಮಿತಿ ಸದಸ್ಯ, ಕರ್ನಾಟಕ ಪತ್ರಿಕಾ ಅಕಾಡೆಮಿ (ಈಗ ಅದು ಮಾಧ್ಯಮ ಅಕಾಡೆಮಿ ಆಗಿದೆ) ಅಧ್ಯಕ್ಷ. ಅಮೆರಿಕ, ಯೂರೋಪ್, ಇರಾನ್, ಜಪಾನ್ ಪ್ರವಾಸಗಳನ್ನು ರಸವತ್ತಾಗಿ ಓದುಗರ ಜತೆ ಲೇಖನವಾಗಿ ಹಂಚಿಕೊಂಡರು.

	ಗಾಂಧೀ ಅರ್ಥವಿಚಾರ, ರಾಜನೀತಿ, ಭೂದಾನಯಜ್ಞ ಸಮಗ್ರ ದರ್ಶನ, ಜಾನ್ ಎಫ್ ಕೆನಡಿ, ಅಮೆರಿಕದ ಕಾರ್ಮಿಕ ವರ್ಗದ ಕತೆ, ವಿನೋಬಾ ಕಂಡ ಗಾಂಧೀ, ಬರೋಡ ಡೈನಮೈಟ್ ಸಂಚು, ರಾಮಮನೋಹರ ಲೋಹಿಯಾ ಖಾದ್ರಿ ಶಾಮಣ್ಣ ಬರೆದ-ಅನುವಾದ ಮಾಡಿದ ಕೃತಿಗಳು.

	ಸಂಪಾದಕೀಯ, ಅಗ್ರಲೇಖನ, ಮುಖಪುಟ ಸಂಪಾದಕೀಯಗಳಿಗೆ ಎತ್ತಿದ ಕೈ. ಅವರ ವ್ಯಕ್ತಿಚಿತ್ರಗಳು ಚಿತ್ತಾಕರ್ಷಕ. ಪುಟ್ಟ ಪುಟ್ಟ ವಾಕ್ಯಗಳಿಂದ, ಕನ್ನಡಕ್ಕೆ ಹೊಸತನತಂದರು. ಅವರ ಸಂಸ್ಕøತ ಹಿಂದಿ ಜ್ಞಾನ, ಕನ್ನಡಕ್ಕೆ ವರವಾಯಿತು. ಖಾದ್ರಿಯವರ ಬಾನುಲಿ ಭಾಷಣಗಳು, ಚಿಂತನ ಕಾರ್ಯಕ್ರಮಗಳು ಶ್ರೋತೃಗಳಿಗೆ ರಸದೂಟ. ಜೀವನದಲ್ಲೂ ಶಿಸ್ತು, ಅಚ್ಚುಕಟ್ಟುತನಕ್ಕೆ ಆದ್ಯತೆ.	
									(ಕೆ.ಎಸ್.ಅಚ್ಯುತನ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ